Thursday, November 13, 2008

ಯುಗಳ ಗೀತೆ - ೧೦

ನಿನ್ನ ನನ್ನ ತುಟಿಗಳ ಮೇಲೆ ಮಧುರ ಪ್ರೇಮ ಗೀತೆ ಇನಿಯ
ಮುಂದೆ ಮುಂದೆ ನಾವು ಹಿಂದೆ ಹಿಂದೆ ಪ್ರೀತಿ ಇನಿಯ

ಮೊದಲ ಮಧುರ ಮೈತ್ರಿಯ ಮೊದಲ ರಾತ್ರಿ ನೆನಪಳುಲಿವುದು
ಹೂವುಗಳ ನಗರದಲ್ಲಿ ಕಳೆದ ಕ್ಷಣವ ಹೇಗೆ ಮರೆವುದು
ಹೀಗೆ ನಲಿಯುತ ಜೀವನವ ಕಳೆವ ಇನಿಯ
ಮುಂದೆ ಮುಂದೆ ನಾವು ಹಿಂದೆ ಹಿಂದೆ ಪ್ರೀತಿ ಇನಿಯ

ಕಣ್ಗಳಲಿ ನೀ ನೆಲೆಸು ರೆಪ್ಪೆಗಳಲಿ ಮುಚ್ಚಿಕೊಳ್ಳುವೆ
ಮೊದಲು ನಿನ್ನ ಕಂಗಳೊಡನೆ ನಾನು ಸ್ವಲ್ಪ ಮಾತನಾಡುವೆ
ಇಲ್ಲೇ ನಮ್ಮ ಇಡಿ ಜೀವನ ಸವೆಸುವ ಬಾರೋ ಇನಿಯ
ಮುಂದೆ ಮುಂದೆ ನಾವು ಹಿಂದೆ ಹಿಂದೆ ಪ್ರೀತಿ ಇನಿಯ



Sunday, October 19, 2008

ಯುಗಳ ಗೀತೆ - ೯

ಹೇಳು ಏತಕೆ ಜೀವ ನೊಂದಿದೆ
ಹೇಳು ಏತಕೆ ಮೊಗವು ಬಾಡಿದೆ
ಹೇಳು ಎನ್ನ ಮನದನ್ನೆ - ಹೇಳು ನಿನ್ನ ಚಿಂತೆ

ಹರಳು ಬಿದ್ದ ಒಡವೆಯಂತೆ
ಹೆರಳು ತೆಗೆದ ಸುಕೇಶಿನಿಯಂತೆ
ಕುಂದಿದೆ ಕಳೆಯು ಇಂದು
ಹೇಳು ಎನ್ನ ಮನದನ್ನೆ - ಹೇಳು ನಿನ್ನ ಚಿಂತೆ

ಹೊನಲು ಬೆಳಕ ಚಂದ್ರಮನುಂಟು
ಮುದವ ತರುವ ಭೋಜನವುಂಟು
ಮುದಿಸದು ನಿನ್ನನು ಏನೂ
ಹೇಳು ಎನ್ನ ಮನದನ್ನೆ - ಹೇಳು ನಿನ್ನ ಚಿಂತೆ

ಸ್ವರ್ಗ ಸುಖವ ಕಂಡೆನು ಇಲ್ಲಿಯೆ ನಾನು
ಮನವನರಿತ ಗೆಳೆಯನು ನೀನು
ದೂರಲು ಏನಿದೆ ಚಿಂತೆ
ಏನು ಇಲ್ಲ ಇನಿಯ - ಎನ್ನ ಮನದ ಒಡೆಯ

Tuesday, July 22, 2008

ಯುಗಳ ಗೀತೆ - ೮

ಹೆಣ್ಣು
ಮೊದಲನೆ ಬಾರಿ ನಿನ್ನ ಕಂಡೊಡನೆ ಮನ ಸೋತೆ
ನಿನ್ನ ಒಲವು ಪ್ರೇಮ ಪ್ರಣಯಕೆ ನಾ ಹಾತೊರೆವೆ
ಪ್ರೀತಿಯ ಹೂ ಮನದಲ್ಲಿ ಅರಳಿ ಕಂಪಿಸಿದೆ

ಹೆಣ್ಣು
ಸಂಜೆ ರಂಗು ಬಾನಿನಲಿ, ಅರುಣರಾಗ ನೀನಾದೆ
ಹೊನ್ನ ಬಣ್ಣ ಪ್ರೀತಿಯ ತಂದು, ನನ್ನ ನೀನು ರಂಗಿಸಿದೆ
ಗಂಡು
ಒಲವಿನ ಪ್ರತಿಮೆ ನೀನಾದೆ, ನನ್ನ ಮನದ ಗುಡಿಯಲಿ ನೀ ನಿಂತೆ
ಹೆಣ್ಣು
ಒಣಗಿ ನಿಂತ ಭೂಮಿಗೆ , ಚೈತ್ರ ಋತುವು ನೀನಾದೆ
ಪ್ರೀತಿಯ ಗಂಗ ಧಾರೆಯ ತಂದು ಬಾಳನ್ನು ಹಸಿರಾಗಿಸಿದೆ
ಗಂಡು
ಹರುಷದ ಚಿಲುಮೆ ನೀನಾದೆ ನನ್ನ ಒಲವಿನ ದಾಹವ ನೀಗಿದೆ
ಹೆಣ್ಣು
ಪ್ರೀತಿಯ ಹೂವು ಮನದಲ್ಲಿ ಅರಳಿ ಕಂಪಿಸಿದೆ
ಮೊದಲನೆ ಬಾರಿ ನಿನ್ನ ಕಂಡೊಡನೆ ಮನ ಸೋತೆ
ನಿನ್ನ ಒಲವು ಪ್ರೇಮ ಪ್ರಣಯಕೆ ನಾ ಹಾತೊರೆವೆ
ಪ್ರೀತಿಯ ಹೂ ಮನದಲ್ಲಿ ಅರಳಿ ಕಂಪಿಸಿದೆ


ಗಂಡು
ಕೋಪ ತಾಪದ ಜಗದಲ್ಲಿ, ಸಹನಾ ಮೂರ್ತಿ ನೀನಾದೆ
ಮನವನರಿತ ಸಹಚಾರಿಯಂತೆ, ಬದುಕ ಪಯಣಕೆ ಜೊತೆಯಾದೆ
ಹೆಣ್ಣು
ಕತ್ತಲು ತುಂಬಿದ ಮನಕೆಲ್ಲ ಬೆಳಕಿನ ಜ್ಯೋತಿಯು ನೀನಾದೆ
ಗಂಡು
ತಪ್ಪು ತುಂಬಿದ ಇಳೆಯಲ್ಲಿ, ಕ್ಷಮಯಾಧರಿತ್ರಿ ನೀನಾದೆ
ನನ್ನು ಕುಂದು ಕೊರತೆಗಳೆಲ್ಲ, ಮರೆತು ಮನ್ನಿಸಿ ಪ್ರೀತಿಸಿದೆ
ಹೆಣ್ಣು
ದುಗುಡವೇ ತುಂಬಿದ ಎದೆಯಲ್ಲಿ, ಸುಖದ ಸಿರಿಯಾ ನೀ ತಂದೆ
ಪ್ರೀತಿಯ ಹೂವು ಮನದಲ್ಲಿ ಅರಳಿ ಕಂಪಿಸಿದೆ
ಮೊದಲನೆ ಬಾರಿ ನಿನ್ನ ಕಂಡೊಡನೆ ಮನ ಸೋತೆ

ನಿನ್ನ ಒಲವು ಪ್ರೇಮ ಪ್ರಣಯಕೆ ನಾ ಹಾತೊರೆವೆ
ಪ್ರೀತಿಯ ಹೂ ಮನದಲ್ಲಿ ಅರಳಿ ಕಂಪಿಸಿದೆ

Friday, July 18, 2008

ಯುಗಳ ಗೀತೆ - ೭

ನಿನ್ನ ರೂಪು ಬಲು ಚಂದ, ನಿನ್ನ ಮಾತೆ ಮಕರಂದ
ಹೇಗೋ ಏನೋ ನೀ ತಂದೆ ನನ್ನ ಹೃದಯದಿ ಆನಂದ
ಬಾರೋ ನನ್ನ ಹಮ್ಮೀರ, ನೀನೆ ನನ್ನ ಸರದಾರ
ನನ್ನ ಬಾಳ ಪುಟಕೆಲ್ಲ ನಿನ್ನ ಪ್ರೀತಿಯೆ ಆಧಾರ

ಮನದ ಗುಡಿಯ ಗರ್ಭದಲ್ಲಿ ನಿಂತೇ ನೀ ಮೂರ್ತಿಯಂತೆ
ಪ್ರೇಮ ಪೂಜೆ ಸಲ್ಲಿಸು ಎನ್ನುತ ಪ್ರೀತಿಯ ಬೇಡಿ ನಿಂತೇ
ಪ್ರೀತಿ ಧಾರೆ ಸುರಿಸಿ ನೀನು ಮುಂಗಾರಿನ ವರ್ಷ ತಂದೆ
ಬರಡು ಮನದಿ ಮಧುರ ಪ್ರೇಮ ಆಸೆ ಚಿಗುರನ್ನು ತಂದೆ
ನಿನ್ನಯ ನಲ್ಮೆಗೆ ಅಂದೇ ನಾ ಸೋತೆನು ನೀನು ಇರದೇ ನಾನು ಇನ್ನು ಬಾಳಲಾರೆ

ನಿನ್ನ ಪ್ರೀತಿ ನನ್ನಯ ಮನಕೆ ತಂದಿತು ನೂತನ ಅರ್ಥ
ನಿನ್ನ ಪ್ರೇಮ ಪಡೆಯಬೇಕು ಎನ್ನುವುದೇ ನನ್ನ ಸ್ವಾರ್ಥ
ನಿನ್ನ ನೆರಳ ಆಸರೆಯಲ್ಲಿ ನನ್ನೆಲ್ಲ ಬದುಕ ಕಳೆವೆ
ನಿನ್ನ ಒಲವ ಸಿರಿಯನೊಂದೆ ಕೊನೆವರೆಗೂ ಬೇಡುವೆ
ಮುಡಿಪು ನನ್ನೆಲ್ಲವು ನಿನ್ನಯ ಪ್ರೀತಿಗೆ ನೀನು ಇರದೇ ನಾನು ಇನ್ನು ಬಾಳಲಾರೆ

Tuesday, July 15, 2008

ಐಟಂ ಗೀತೆ - ೨

ನಂಗೊತ್ತು ನಿನಗಿಂದು ಬೇಕೆನಿಸಿದೆ ಸುಖ ಅಂತ
ಕೇಳಿದ್ದು ನೀಡೋಕೆ ಬಂದಿರುವೆ ನಾನಂತ
ಚಿಂತೆಯ ಮರೆತು ಬಾರೋ ಜಾಣ
ಮೈ ಮನ ಅರಳಿಸು ಬಾರೋ ಜಾಣ

ಕೆಂಪಾದ ನನ್ನ ತುಟಿಯಿಂದ ಜಿನುಗುತಿದೆ ಮಕರಂದ
ಸೊಂಪಾದ ನನ್ನ ಮೈಯಿಂದ ಚಿಮ್ಮುತಿದೆ ಆನಂದ
ಮಕರಂದ ಹೀರು ಬಾರೋ ಜಾಣ
ಆನಂದ ಹೊಂದು ಬಾರೋ ಜಾಣ

ಇಂದೀಗೆ ಈ ಅಂದ ನಿನಗೇನೆ ಮುಡಿಪಾಯ್ತು
ನಾಳೆಗೆ ನನ್ನ ಚೆಂದ ಇನ್ನೊಬರ ಸ್ವತ್ತಾಯ್ತು
ನಾಳೆಚಿಂತೆ ಬಿಟ್ಟು ಬಾರೋ ಜಾಣ
ಇಂದೇ ನನ್ನ ಲೂಟಿ ಮಾಡೋ ಜಾಣ


ಐಟಂ ಗೀತೆ - ೧

ತುಳುಕುತ್ತ ಬಳುಕುತ್ತ ಕರೆಯುತಿದೆ ನನ್ನ ಸೊಂಟ
ನನ್ನನ್ನು ಸ್ವೀಕರಿಸು ಬಾರೋ ಎಂಟೆದೆ ಬಂಟ
ಬಾರೋ ಬಾ ನೀಡೋ ಸುಖ
ಮರೆಸುವೆ ನಿನ್ನ ಎಲ್ಲ ದುಃಖ

ನನ್ನ ರೂಪು ನನ್ನ ರಂಗು ನಿನ್ನನ್ನೇ ಕರಿತೈತೆ
ನನ್ನ ದೇಹ ನಿನ್ನ ಸಂಗ ಸುಖವನ್ನೇ ಬಯಸೈತೆ
ಬಾರೋ ಬಾ ನೀಡೋ ಸುಖ
ಮರೆಸುವೆ ನಿನ್ನ ಎಲ್ಲ ದುಃಖ


ನನ್ನ ನೋಡಿ ನಿನಗೇನು ಆಸೇನೆ ಬರ್ತಿಲ್ವಾ
ನನ್ನ ಜೋಡಿ ಆಗೋಕೆ ನಿಂಗೇನು ಮನಸಿಲ್ವ
ಬಾರೋ ಬಾ ನೀಡೋ ಸುಖ
ಮರೆಸುವೆ ನಿನ್ನ ಎಲ್ಲ ದುಃಖ

Friday, June 20, 2008

ಕನ್ನಡ ಹಾಡು ೬

ಸನಿಹ ಸನಿಹ ಸವಿಯೋ ಸಮಯ
ಹೃದಯ ಹಾಡಿದೆ ಹೊಸತು ರಾಗ
ನವ ಪಲ್ಲವಿಯೋ ಹಿತ ಅನುಭವೋ
ಮಧುರಾಮೃತವೋ, ಏನೋ ನಾನರಿಯೇ

ನಿನ್ನೊಡನೆ ನಾ ಕಳೆದ ಕ್ಷಣಗಳು ಜೀವನದ ಮಹಾಸುದಿನ
ನಿನ್ನೊಡನಾಟ ಕಲಿಸಿತು ನನಗೆ ಬದುಕಿನ ನೂತನ ಅರ್ಥ
ಹಾಲಲಿ ಜೇನು ಬೆರೆತ ಹಾಗಿದೆ ನಮ್ಮಯ ಪ್ರೀತಿ ಪ್ರೇಮ
ಹೂವಲಿ ಪರಿಮಳ ಬೆರೆತ ಹಾಗಿದೆ ನಮ್ಮಯ ಪ್ರೀತಿ ಪ್ರೇಮ
ಸನಿಹ ಸನಿಹ ಸವಿಯೋ ಸಮಯ ..........ಹೃದಯ ಹಾಡಿದೆ ಹೊಸತು ರಾಗ
ನವ ಪಲ್ಲವಿಯೋ ಹಿತ ಅನುಭವೋ ..........ಮಧುರಾಮೃತವೋ, ಏನೋ ನಾನರಿಯೇ


ಬಾಳಿನ ಬಳ್ಳಿಗೆ ಆಸರೆಯಾದೆ ಹೆಮ್ಮರದಂತೆ ಬಳಿ ನಿಂತು
ಕುಬೇರನ ಸಿರಿಯಂತೆ ಅಕ್ಷಯವಾಗಲಿ ನಮ್ಮಯ ಒಲವಿನ ಕಂತು
ಕನಸಲಿ ಕಂಡ ಒಲವಿನ ಸಿರಿಯನು ನನಸಲಿ ತಂದೆ ನೀನು
ಸಂತ ಕಾಲದ ಹರುಷವ ತಂದೆ ಎಂದೆಂದಿಗೂ ಎನಗೆ ನೀನು
ಸನಿಹ ಸನಿಹ ಸವಿಯೋ ಸಮಯ ..........ಹೃದಯ ಹಾಡಿದೆ ಹೊಸತು ರಾಗ
ನವ ಪಲ್ಲವಿಯೋ ಹಿತ ಅನುಭವೋ ..........ಮಧುರಾಮೃತವೋ, ಏನೋ ನಾನರಿಯೇ

Wednesday, June 18, 2008

ನಿಶ್ಚಿತಾರ್ಥ

ಹುಸಿ ಮುನಿಸಿನಲಿ ಹೊಸ ಹುರುಪಿನಲಿ ನವ ಪ್ರೀತಿಯ ತಂದನು ಭಾವಿ ಮದುಮಗ
ನಸು ನಾಚುತಲಿ ತುಸು ಹಿಗ್ಗಿನಲಿ ಸವಿ ಪ್ರೇಮವ ತಂದಳು ಭಾವಿ ಮದುಮಗಳು
ಸ್ವಲ್ಪ ಬಿಂಕದಲಿ ಸ್ವಲ್ಪ ದರ್ಪದಲಿ ನೂತನ ಬೆಸುಗೆಯ ಬೆಸೆಯಲು ಬಂದರು ಬೀಗರು
ನೆರೆದಿಹ ನೆಂಟರು ಅಗಮಿಸಿಹ ಬಂಧುಗಳು ಹರಸಿಹರು ಇವರೀರ್ವರ ನಿಷ್ಚಿತಾರ್ಥವ

ವೈಯಾರವ ಮಾಡುತ ವಧುವನು ಅಲಂಕರಿಸುತ ಓಡಾಡುತಲಿರುವರು ಗೆಳತಿಯರು ಹರುಷದಲಿ
ಹಾಡನು ಹಾಡುತ ಕೀಟಲೆ ಮಾಡುತ ವರನನು ರೇಗೆಸುತಲಿರುವರು ಗೆಳೆಯರು ನಲುಮೆಯಲಿ
ಮಂತ್ರವ ಪಠಿಸುತ ಬೀಗರ ಒಪ್ಪಿಸುತ ಲಗ್ನವ ಕಟ್ಟುತಲಿರುವರು ಪುರೋಹಿತರು ಆನಂದದಲಿ
ಕೂಗುತ ಆಡುತ ಓಡುತ ನಲಿಯುತ ಎಲ್ಲರ ಕಾಲಿಗೆ ಏರುಗುತಲಿರುವರು ಚಿಣ್ಣರು ಸಂತೋಷದಲಿ

ವಿರಸವ ಪ್ರೇಮವ ದುಃಖವ ಸುಖವ ಎಲ್ಲವ ಹಂಚಲು ದೊರೆತಿಹರೊಬ್ಬರು
ಎನ್ನುತ ಎಲ್ಲರ ಕಣ್ತಪ್ಪಿಸಿ ವಧುವಿನೆಡೆಗೆ ಕಳ್ಳ ನೋಟವ ಬೀರಿಹನು ವರನು
ಮನದಂಗಳದಲಿ ನವ ರಂಗೋಲಿಯ ಮೂಡಿಸಿ ಬಣ್ಣವ ತುಂಬಿಹರೊಬ್ಬರು
ಎನ್ನುತ ತಲೆ ಬಗ್ಗಿಸಿ ನೆಲವನು ಕೆರೆಯುತ ನಾಚಿಕೆಯಲಿ ಮುಳುಗಿಹಳು ವಧುವು

ಭೋಜನವಾಯಿತು ತಾಂಬೂಲವು ಆಯಿತು ಹೊರಟರು ಬಂಧುಮಿತ್ರರೆಲ್ಲರು
ಹೊರಡುವ ಸಮಯವೂ ಸನಿಹಕೆ ಬರಲು ಏಕೋ ಮಂಕಾದರು ವಧು ವರರಿಬ್ಬರು
ವಿರಹದ ವೇದನೆ ಕಾಡಿತು ಇಬ್ಬರನು ತಂದಿತು ಎದೆಯಲಿ ನೋವಿನ ಛಾಯೆಯನು
ಮದುವೆಯ ದಿನವು ಬೇಗನೆ ಬರಲಿ ಎನ್ನುತ ದೇವರನು ಬೇಡಿದರು ವಧು ವರರಿಬ್ಬರು

Wednesday, June 4, 2008

ಕನ್ನಡ ಹಾಡು - ೫

ಕೊಡಚಾದ್ರಿಯ ಬೆಟ್ಟದಲಿ ನಡೆದಾದುತ
ವನಸಿರಿಯ ಸವಿಸೊಲ್ಲನು ಸವಿದಾಡುವ
ಕಡಲಂಚಿನ ತೀರದಲಿ ಅಲೆದಾಡುತ
ಅಲೆಗಳಲಿ ಮುಳುಗೇಳುತ ಓಲಾಡುವ
ಮಹದಾಸೆಯು ಮೂಡಿದೆ ಮನದಲ್ಲಿ

ಹಿಮದಾವೃತ ಗಿರಿಗಳಲಿ ನಲಿದಾಡುತಲಿ
ಹಿಮಗೊಂಬೆಯ ನಿರ್ಮಿಸಿ ಕುಣಿದಾಡುವ
ಹಸಿರುಟ್ಟು ಮೆರೆದಿರುವ ದಟ್ಟ ಕಾಡಿನಲಿ
ಮೂಕ ಪ್ರಾಣಿಗಳ ಮಾತಡಿಸೆ ಹುಡುಕಾಡುವ
ಮಹದಾಸೆಯು ಮೂಡಿದೆ ಮನದಲ್ಲಿ

ಬೆಳ್ಳಿಯಂಚಿನ ಬಿಳಿಮೋಡದ ನೀಲ್ಬಾನಿನಲಿ
ಚಿಲಿಪಿಲಿಗುಟ್ಟುತ ಹಕ್ಕಿಗಳಂತೆ ಹಾರಾಡುವ
ಇರುಳಿನಲಿ ತಂಪೆರೆಯುವ ಹಾಲ್ಬೆಳದಿಂಗಳಲಿ
ಮಿನುಗುತ ತಾರೆಗಳಂತೆ ಮೆರೆದಾಡುವ
ಮಹದಾಸೆಯು ಮೂಡಿದೆ ಮನದಲ್ಲಿ



Tuesday, June 3, 2008

ಕನ್ನಡ ಹಾಡು - ೪

ಅನುರಾಗ ಅರಳಿಸಿದ ಆನಂದ
ಭಾವನೆಗಳ ಬೆಸೆಯಿಸಿದ ಬಂಧ
ತನುಮನದಿ ತನ್ಮಯತೆ ತಂದ
ಈ ಪ್ರೀತಿ ಎಷ್ಟು ಮಧುರ....... ಈ ಪ್ರೀತಿ ಎಷ್ಟು ಸುಮಧುರ .......

ಸಮರಸದ ಸೊಂಪನು ಸ್ಪರ್ಶಿಸಿದ
ಹೃದಯದಲಿ ಹೊನಲನು ಹರಿಸಿದ
ಪರಮಪವಿತ್ರ ಪ್ರೇಮವನು ಫಲಿಸಿದ
ಈ ಪ್ರೀತಿ ಎಷ್ಟು ಮಧುರ....... ಈ ಪ್ರೀತಿ ಎಷ್ಟು ಸುಮಧುರ .......

ಜನುಮದ ಜತನವ ಜೋಡಿಸಿದ
ಕುಂದದ ಕಂಪನು ಕೂಡಿಸಿದ
ನಲ್ಮೆಯ ನನಸನು ನೆನಪಿಸಿದ
ಈ ಪ್ರೀತಿ ಎಷ್ಟು ಮಧುರ....... ಈ ಪ್ರೀತಿ ಎಷ್ಟು ಸುಮಧುರ .......

ಕನ್ನಡ ಹಾಡು - ೩

ಒಲವಲಿ ಹಾಡಿಹ ಹಾಡಿನ ಈ ಸಂಭ್ರಮ
ಎದೆಯಲಿ ಉಕ್ಕಿಹ ಪ್ರೇಮದ ಈ ಪರಿಕ್ರಮ
ಹರುಶವನ್ನು ಮೊಗೆದು ಮೊಗೆದು ತಂದಿದೆ ಈ ಪ್ರೇಮ
ಬದುಕಿನಲ್ಲಿ ಹೊಸ ಹೊಸ ಸಂತಸ ತಂದಿದೆ ಈ ಪ್ರೇಮ

ಸೂರ್ಯನಂತೆ ಚಂದ್ರನಂತೆ ನಮ್ಮ ಪ್ರೀತಿ ಶಾಶ್ವತ
ಜನುಮದ ಜೋಡಿ ನಾವು ಎಂದು ಎಲ್ಲರ ಅಭಿಮತ
ನನ್ನಯ ಜೀವಕೆ ನಿನ್ನದೇ ಅಂಕಿತ
ನೀನು ಇರದೆ ಬಾಳಿನಲ್ಲಿ ಸಾವು ನಿಶ್ಚಿತ
ಸಮೃದ್ದಿಯನ್ನು ಹೊಸೆದು ಹೊಸೆದು ತಂದಿದೆ ಈ ಪ್ರೇಮ
ಬದುಕಿನಲ್ಲಿ ಹಿತ ಹಿತ ಅನುಭವ ತಂದಿದೆ ಈ ಪ್ರೇಮ

ನದಿಯು ಹರಿದು ಕದಲನು ಸೇರುವ ಹಾಗೆಯೇ
ಒದಲಿನಲ್ಲಿ ನಾನು ಸೇರುವೆ ಹೀಗೆಯೇ
ನಿನ್ನಯ ಮಡಿಲಲಿ ಮಗುವಾಗುವ ಹಂಬಲ
ನಿನ್ನ ಪ್ರೀತಿಯಲ್ಲದೆ ಬೇರೆ ಬೇಡ ಪ್ರತಿಫಲ
ಸಂತ್ರುಪ್ತಿಯನ್ನು ಬೆಸೆದು ಬೆಸೆದು ತಂದಿದೆ ಈ ಪ್ರೇಮ
ಬದುಕಿನಲ್ಲಿ ಬಗೆ ಬಗೆ ಭಾಗ್ಯವ ತಂದಿದೆ ಈ ಪ್ರೇಮ

ಕನ್ನಡ ಹಾಡು - ೨

ಇಲ್ಲ ಇಲ್ಲ ಇಲ್ಲ ಇದು ನಿಜಾನೆ ಅಲ್ಲ
ನೀನು ನನ್ನವಳಾದೆಂತ ನಂಬೊಕಾಗ್ತಿಲ್ಲ
ನನ್ನ ನಲ್ಲೆ ನೀನು ಚೆಲುವೆ ಗೊತ್ತಲ್ಲ - ನಿನ್ನ ಮೇಲೆ ನನಗೆ ಮನಸ್ಸು ಉಂಟಲ್ಲ

ಬದುಕುವ ಆಸೆಯು ಕಮರಿದಾಗ ದೊರಕಿದೆ
ಪ್ರೀತಿಯೆಂಬ ಅಮೃತ ತಂದು ಜೀವಸಿಂಚನ ನೀಡಿದೆ
ಸ್ನೇಹವು ಪ್ರೇಮವು ಮಧುರವಾಗಿ ಬೆರೆತಿದೆ
ನನ್ನ ಮನದ ಆಳದಲ್ಲಿ ಸಾರ್ಥಕತೆಯ ತಂದಿದೆ
ದೇವತೆಯಂತೆ ಸಲಹು ಎನ್ನ ನೀನು ಎಂದಿಗೂ - ನಿನ್ನ ಬಿಟ್ಟು ಬಾಳಲಾರೆ ನಾನು ಎಂದಿಗೂ
ನನ್ನ ನಲ್ಲೆ ನೀನು ಚೆಲುವೆ ಗೊತ್ತಲ್ಲ - ನಿನ್ನ ಮೇಲೆ ನನಗೆ ಮನಸ್ಸು ಉಂಟಲ್ಲ

ಬದುಕಿನ ಹಾದಿಯಲ್ಲಿ ಜೊತೆಯಾಗಿ ನಡೆಯುವ
ಸುಖವೇ ಇರಲಿ ದುಃಖವೇ ಬರಲಿ ಒಂದಾಗಿ ಸಾಗುವ
ಕಾಲದ ಚಕ್ರವು ಉರುಳಲೂ ಬಾಳಲಿ
ಒಲವ ಮೈತ್ರಿಯ ರೆಕ್ಕೆಯು ಬಲಿತು ಬಾನಿನಲ್ಲಿ ಹಾರಲಿ
ಪ್ರೀತಿ ಒರತೆ ಬತ್ತದೆ ಇರಲಿ ನಮ್ಮಲೆಂದಿಗೂ - ಜನುಮ ಜನುಮದಲ್ಲು ಜೊತೆಯು ನಾವು ಎಂದಿಗೂ
ನನ್ನ ನಲ್ಲೆ ನೀನು ಚೆಲುವೆ ಗೊತ್ತಲ್ಲ - ನಿನ್ನ ಮೇಲೆ ನನಗೆ ಮನಸು ಉಂಟಲ್ಲ

ನನ್ನ ನಲ್ಲ ನೀನು ಜಾಣ ಗೊತ್ತಲ್ಲ - ನಿನ್ನ ಬಿಟ್ಟು ನಾನು ಎಲ್ಲೂ ಹೋಗೊಲ್ಲ
ನನ್ನ ನಲ್ಲೆ ನೀನು ಚೆಲುವೆ ಗೊತ್ತಲ್ಲ - ನಿನ್ನ ಮೇಲೆ ನನಗೆ ಮನಸು ಉಂಟಲ್ಲ

ಕನ್ನಡ ಹಾಡು - ೧

ಬಯಸದ ಭಾಗ್ಯವ ಬದುಕಲಿ ತಂದಿತು ಮನದಲಿ ಮೂಡಿದ ಒಲವು
ಜೀವದ ಬಳ್ಳಿಗೆ ಅಸರೆಯಾಯಿತು - ಪ್ರೀತಿಯು ನೀಡಿದ ಒಲವು

ಒಲುಮೆಯ ದೀಪವು ಬೆಳಗಲು ಮನದಲಿ ಅದುವೇ ಪ್ರೇಮದ ಕಾಲ
ಭಾವದ ಹಕ್ಕಿಯು ಹಾರಲು ಬಾನಲಿ ಅದುವೇ ಪ್ರೇಮದ ಕಾಲ
ಆಸೆಯ ಮಿಂಚು ಚಿಮ್ಮಲು ಕಣ್ಣಲಿ ಅದುವೇ ಪ್ರೇಮದ ಕಾಲ
ಹಾಡುತ ಹಾರುತ ಮನವದು ಕುಣಿಯಲು ಅದುವೇ ಪ್ರೇಮದ ಕಾಲ......
ಅದುವೇ ಪ್ರೇಮದ ಕಾಲ .........
ಬಯಸದ ಭಾಗ್ಯವ ಬದುಕಲಿ ತಂದಿತು ಮನದಲಿ ಮೂಡಿದ ಒಲವು
ಜೀವದ ಬಳ್ಳಿಗೆ ಅಸರೆಯಾಯಿತು - ಪ್ರೀತಿಯು ನೀಡಿದ ಒಲವು


ಎನ್ನಯ ಮನದಲಿ ನೆಲೆಸಲು ನೀನು ಅದುವೇ ಪ್ರೇಮದ ಕಾಲ
ಎನ್ನಯ ಶ್ವಾಸದಿ ಬೆರೆಯಲು ನೀನು ಅದುವೇ ಪ್ರೇಮದ ಕಾಲ
ಅಸ್ಥಿರ ಬದುಕದು ನೆಮ್ಮದಿ ಕಾಣಲು ಅದುವೇ ಪ್ರೇಮದ ಕಾಲ
ಬಾಳಿನ ದೋಣಿಯು ದಡವನು ಸೇರಲು ಅದುವೇ ಪ್ರೇಮದ ಕಾಲ.....
ಅದುವೇ ಪ್ರೇಮದ ಕಾಲ......
ಬಯಸದ ಭಾಗ್ಯವ ಬದುಕಲಿ ತಂದಿತು ಮನದಲಿ ಮೂಡಿದ ಒಲವು
ಜೀವದ ಬಳ್ಳಿಗೆ ಅಸರೆಯಾಯಿತು - ಪ್ರೀತಿಯು ನೀಡಿದ ಒಲವು


ಪತ್ರ

ನಮ್ಮ ನಡುವೆ ಭೂಮಿಯು ಎಷ್ಟೇ ಅಂತರವಿರಲಿ
ಪತ್ರ ಮಾಧ್ಯಮ ನಿರಂತರವಾಗಿರಲಿ
ಓಲೆ ಮುಖೇನ ತಿಳಿಯ ಬಯಸುವ ವಿಚಾರ
ಮನಕೆ ಆಹ್ಲಾದ ನೀಡುವ ಶಿಷ್ಟಾಚಾರ

ಸಂತೈಸುವ ಹಿತ ನುಡಿಗಳ ಪತ್ರದ ಕಂತು
ಭರಿಸುವುದು ಮನದಲಿ ಮೂಡಿದ ನೋವ
ಗೆಳೆಯನ, ಗೆಳತಿಯ ಸ್ನೇಹದ ಸವಿ ಮಾತು
ತರುವುದು ಮನಕೆ ಹಿತಕರ ಅನುಭವ

ನನ್ನ ನಿನ್ನ ಈ ಸ್ನೇಹದ, ಓಲೆಗಳ ವಾಹಿನಿ
ಹರಿಯಲಿ ನಿರಂತರವಾಗಿ ಧಾರಾವಾಹಿನಿಯಂತೆ
ವಿನೋದದ ವಿಲಾಸದ ಆತ್ಮೀಯ ಮನರಂಜನಿ
ಮರೆಸಲಿ ಮನದಲಿ ಅಡಗಿದ ದುಗುಡ ಚಿಂತೆ