Wednesday, June 18, 2008

ನಿಶ್ಚಿತಾರ್ಥ

ಹುಸಿ ಮುನಿಸಿನಲಿ ಹೊಸ ಹುರುಪಿನಲಿ ನವ ಪ್ರೀತಿಯ ತಂದನು ಭಾವಿ ಮದುಮಗ
ನಸು ನಾಚುತಲಿ ತುಸು ಹಿಗ್ಗಿನಲಿ ಸವಿ ಪ್ರೇಮವ ತಂದಳು ಭಾವಿ ಮದುಮಗಳು
ಸ್ವಲ್ಪ ಬಿಂಕದಲಿ ಸ್ವಲ್ಪ ದರ್ಪದಲಿ ನೂತನ ಬೆಸುಗೆಯ ಬೆಸೆಯಲು ಬಂದರು ಬೀಗರು
ನೆರೆದಿಹ ನೆಂಟರು ಅಗಮಿಸಿಹ ಬಂಧುಗಳು ಹರಸಿಹರು ಇವರೀರ್ವರ ನಿಷ್ಚಿತಾರ್ಥವ

ವೈಯಾರವ ಮಾಡುತ ವಧುವನು ಅಲಂಕರಿಸುತ ಓಡಾಡುತಲಿರುವರು ಗೆಳತಿಯರು ಹರುಷದಲಿ
ಹಾಡನು ಹಾಡುತ ಕೀಟಲೆ ಮಾಡುತ ವರನನು ರೇಗೆಸುತಲಿರುವರು ಗೆಳೆಯರು ನಲುಮೆಯಲಿ
ಮಂತ್ರವ ಪಠಿಸುತ ಬೀಗರ ಒಪ್ಪಿಸುತ ಲಗ್ನವ ಕಟ್ಟುತಲಿರುವರು ಪುರೋಹಿತರು ಆನಂದದಲಿ
ಕೂಗುತ ಆಡುತ ಓಡುತ ನಲಿಯುತ ಎಲ್ಲರ ಕಾಲಿಗೆ ಏರುಗುತಲಿರುವರು ಚಿಣ್ಣರು ಸಂತೋಷದಲಿ

ವಿರಸವ ಪ್ರೇಮವ ದುಃಖವ ಸುಖವ ಎಲ್ಲವ ಹಂಚಲು ದೊರೆತಿಹರೊಬ್ಬರು
ಎನ್ನುತ ಎಲ್ಲರ ಕಣ್ತಪ್ಪಿಸಿ ವಧುವಿನೆಡೆಗೆ ಕಳ್ಳ ನೋಟವ ಬೀರಿಹನು ವರನು
ಮನದಂಗಳದಲಿ ನವ ರಂಗೋಲಿಯ ಮೂಡಿಸಿ ಬಣ್ಣವ ತುಂಬಿಹರೊಬ್ಬರು
ಎನ್ನುತ ತಲೆ ಬಗ್ಗಿಸಿ ನೆಲವನು ಕೆರೆಯುತ ನಾಚಿಕೆಯಲಿ ಮುಳುಗಿಹಳು ವಧುವು

ಭೋಜನವಾಯಿತು ತಾಂಬೂಲವು ಆಯಿತು ಹೊರಟರು ಬಂಧುಮಿತ್ರರೆಲ್ಲರು
ಹೊರಡುವ ಸಮಯವೂ ಸನಿಹಕೆ ಬರಲು ಏಕೋ ಮಂಕಾದರು ವಧು ವರರಿಬ್ಬರು
ವಿರಹದ ವೇದನೆ ಕಾಡಿತು ಇಬ್ಬರನು ತಂದಿತು ಎದೆಯಲಿ ನೋವಿನ ಛಾಯೆಯನು
ಮದುವೆಯ ದಿನವು ಬೇಗನೆ ಬರಲಿ ಎನ್ನುತ ದೇವರನು ಬೇಡಿದರು ವಧು ವರರಿಬ್ಬರು

No comments: